ಮುಳ್ಳು

ಕಾಲೊಳು ಸೇರಿದ ಮುಳ್ಳು,
ನನ್ನೊಳಗೊಂದಾಗಿ
ಕಳೆಯಿತು, ಹಲವು ವರ್ಷ.
ಮುಳ್ಳೋ? ಎಸೆದು ಬಿಡು
ಎಂಬುವರು ಎಲ್ಲರು.
ಅದ್ಹೇಗೆ ಸಾಧ್ಯ?
ನನ್ನ ಕಾಲು ಬೀಗಿ,
ಕುಂಟುತ್ತಾ ನಡೆವಾಗಲೆಲ್ಲ,
ಕುಂಟಿ ನಡೆದು ,‌ಮಾಂಸ ಖಂಡಗಳು
ಸುಡುವಾಗಲೆಲ್ಲ,
ಮುಳ್ಳೇ ಬಂದು ಸಾಂತ್ವನ ಹೇಳಿದ ಭಾವ.

ಮುಳ್ಳಿಗೆ ಪದಗಳ ಮೇಲೆ ಹಿಡಿತವಿಲ್ಲ.
ಹಿಡಿತವಿಲ್ಲವಾದರೂ ನನ್ನಂತೆ ಕವಯಿತ್ರಿ ಎಂದು
ನಟಿಸುವುದಿಲ್ಲ.
ಅದೆಷ್ಟು ಬಾರಿ ಬೇಸರದಿಂದ ಬಳಲಿದ್ದೇನೇ:
ತನ್ನೆಲ್ಲವನ್ನು ಬಿಟ್ಟು , ನನ್ನ ಕಾಲು ಕೊಕ್ಕಿ
ಅದೆಂತ ಹಿಂಸೆಯಾಗಬೇಕು, ಮುಳ್ಳಿಗೆ?
ಮುಳ್ಳಿನ‌ ಸಾಂಗತ್ಯ ನನ್ನ ಜೀವನದ
ದೊಡ್ಡ ಸಾಧನೆಯಾಗಿ ಕಾಣತೊಡಗಿತ್ತು.

ಕಾಲು ಊರದಾಯಿತು. ಕೀವು ತುಂಬಿಕೊಂಡು,
ಊರೆಲ್ಲ ರಸಿಗೆಯಾಗಿ, ಹುಳುಗಳು
ಮುತ್ತಲಾರಂಭಿಸಿದವು.
ಕುಳಿತರೆ ಕಾಲ ನಿಲ್ಲುವುದೇ ಎಂದು
ಎದ್ದು ನಿಲ್ಲಲು ಹೊರಟು
ಬಿದ್ದುಬಿಟ್ಟೆ.
ಡಾಕ್ಟರು ಬಂದರು.‌
ಚಿಕಿತ್ಸೆಗೆ ಶಸ್ತ್ರವ ತಂದರು.
ನೋವಿಗೆ ಕಾರಣವೇ ಮುಳ್ಳು ಎಂದು
ಕಿತ್ತೆಸೆದರು.
ಚುರುಕ್‌ ಎಂದಿತು ಜೀವ.
ನಂಬಲಾಗದೇ, ಕಳೆದೆ ದಿನ ಹಲವು.
ಅತ್ತು ಕಣ್ಣೀರಾದೆ. ಮುದುಡಿ ನಿದ್ದೆಹೋದೆ.

ಈಗ ಓಡಾಡ ಬಲ್ಲೆ. ನರ್ತಿಸಬಲ್ಲೆ.
ಯಾವಾಗಲೋ ಒಮ್ಮೊಮ್ಮೆ
ಮುಳ್ಳಿನ ನೆನಪಾಗಯವುದು; ಬರೀ ನೆನಪಾಗಿಯಷ್ಟೆ.

ಬರೆದದ್ದು: ಸೆಪ್ಟೆಂಬರ್ ೨೭, ೨೦೧೯

Leave a Reply

Discover more from Trupthi Karanth Ramadeva

Subscribe now to keep reading and get access to the full archive.

Continue reading