
ಸಾಹಿತ್ಯ ಸೃಷ್ಠಿಸುವುದು ನೀರು ಕುಡಿದಷ್ಟಯ ಸುಲಭವೇ?
ಅಥವಾ, ನೀರು ಕುಡಿದಷ್ಟು ಸುಲಭವಾಗಿ ಬಂದರೆ ಅದು ಸಾಹಿತ್ಯವೇ?
ಅಮ್ಮ ಸಾವಿರಬಾರಿ ಸಾರಿ ಸಾರಿ ಹೇಳಿದ್ದರು. ಹೆಸರಿಗಾದರೂ ಒಂದು ಉದ್ಯೋಗವಿರಬೇಕು. ಹರೆಯ. ಎಲ್ಲರೂ ಅನ್ನುವಂತೆ ಕುದಿಯುವ ರಕ್ತ ಎಂದು ಕರೆಯೋಣ ಬಿಡಿ. ಮಾತು ಕೇಳಲಿಲ್ಲ, ಕೇಳಿಸಿಕೊಂಡರೂ ಅರಿಯಲಿಲ್ಲ. ನನ್ನದೇನಿದ್ದರೂ ಸರಸ್ವತಿಯ ಪಾದಸೇವೆ ಎಂದು ಭಾಷಣ ಬಿಗಿದದ್ದೇ ಬಂತು. ಎಲ್ಲದಕ್ಕೆ ಸರಿಯಾಗಿ, ಮೂರ್ನಾಲ್ಕು ಪುಸ್ತಕಗಳು, ದಿನಪತ್ರಿಕೆಯ ಇಡೀ ಪುಟದಲ್ಲಿ ಒಂದು ವಿಮರ್ಶೆ ಮುದ್ರಗೊಳ್ಳುವಷ್ಟು
ಹೆಸರು ಮಾಡಿದ್ದಾಯಿತು.
“ಎರಡು ವರ್ಷ ಆಯಿತು. ಒಂದು ಪುಸ್ತಕ ಬಿಡುಗಡೆ ಮಾಡಬಾರದೇ?”
ಥತ್! ಕೇಳಿ ಕೇಳಿ ಸಾಕಾಯ್ತು. ಸಮುದ್ರ ತೀರದಲ್ಲಿ ಮನೆಕಟ್ಟಿ ೪ ವರ್ಷಗಳಾದವು. ಹೊಸದರಲ್ಲಿ, ತೀರದ ದಂಡೆಯ ಮೇಲೆ ಕುಳಿತು ಬರೆಯುತ್ತಿದ್ದೆ. ಈಗ ನೀರಸವೆನಿಸತೊಡಗಿದೆ, ಈ ಕಡಲು. ಅದೇನನ್ನು ಹೇಳುತ್ತಿದೆಯೋ ತಿಳಿಯುತ್ತಿಲ್ಲ. ಸಮುದ್ರ ಮಾತನಾಡುವುದನ್ನೇನು ನಿಲ್ಲಿಸಿಲ್ಲ. ನನ್ನ ಕಿವಿ ಮುಚ್ಚಿ ಹೋಗಿದೆ – ಸೂಜಿ ದಾರದಿಂದ ಹೊಲಿದಂತೆ. ಯಾರ ಮಾತೂ ಕೇಳದು. ಯಾರ ಗೌಜಿ ಗಲಾಟೆಗಳೂ ಇಲ್ಲ. ವಿಚಿತ್ರ ಮೌನ!
ಕುಸುಮಳೋ!
ಜೀವ ವಿಮೆ ಕಂಪೆನಿಯಲ್ಲಿ ಕೆಲಸ ಮಾಡುವವಳು. ಮನೆ ಸಂಬಾಲಿಸುವ ಹೊತ್ತಿನಲ್ಲಿ ಸಾಕು ಸಾಕಾಗುತ್ತದೆ, ಅವಳಿಗೆ. ಅವಳು ದುಡಿದು ಮನೆಗೆ ಬರುವ ಹೊತ್ತಿಗೆ, ಕಾಫಿ ಮಾಡಿ ಇಟ್ಟಿರುತ್ತೇನೆ. ಸಂತೋಷದಿಂದ ಬರಮಾಡಿಕೊಳ್ಳುವುದು ಕಷ್ಟ. ನನ್ನ ಗೋಳು ಮುಖವಾದರೂ ಯಾಕೆತೋರಿಸಲಿ ಎಂದು, ಹಿಂದಿನ ಬಾಗಿಲಿನಿಂದ ನಡೆಯುತ್ತೇನೆ.
“ಕಾಯಿ ಬಿದ್ದ ಹಾಗಾಯಿತು, ನೋಡಿ ಬರ್ತೇನೆ” ಎಂದು ಕಿರುಚಿ, ಕಾಲು ಕೀಳುತ್ತೇನೆ. ಅವಳೇನು ಅರ್ಥವಾಗದ ಮಂಕಲ್ಲ. ಪ್ರಶ್ನಿಸದ ಜಾಣೆ.
“ಬರೆಯುವುದೇನೋ ಬರೀತಿರಲ್ಲ, ಯಾವುದಕ್ಕೂ ಒಮ್ಮೆ ಇನ್ನೊಬ್ಬರಿಗೆ ಓದೋಕೆ ಕೊಡಿ! ಬೇಗ ಅಚ್ಚು ಹಾಕಬಹುದು” ಅಂದೇ ಬಿಟ್ಟಳು ಒಂದು ದಿನ!
* * *
ಬಹಳ ದಿನಗಳಾಗಿತ್ತು. ಲೆಕ್ಕ ಸಿಗದಿದ್ದಷ್ಟು. ಇಲ್ಲ, ಲೆಕ್ಕ ತಪ್ಪಿದ್ದು. ಹಿಡಿದಿದ್ದರೆ ಸಿಗದೇ ಎಲ್ಲಿಗೆ ಹೋಗುತ್ತಿತ್ತು – ದಿನಗಳ ಲೆಕ್ಕ. ಕಡಲು ಬೇಡವೆನಿಸುತ್ತದೆ, ಆದರೂ ಬಂದು ಕೂತಿದ್ದೇನೆ! ತಲೆ ಸಂಪೂರ್ಣ ಕೆಟ್ಟಾಗ ಸ್ವಯಂಭೂರವರಿಗೆ ಕರೆ ಮಾಡಿದ್ದೆ.
ಅವರಂದಿದ್ದರು – ” ನೋಡು, ನಾಹಿತಿ ಅಂದಮೇಲೆ ಇದೆಲ್ಲ ಸಾಮಾನ್ಯ ರಾಜೊತ್ತಮ ಹರಿಹರ ಹೆಸರು ಕೇಳಿದ್ದೀಯೋ? ಆ ಮನುಷ್ಯ, ಒಮ್ಮ್, ಹತ್ತು ವರ್ಷ ಏನೂ ಬರೆಯದೇ ಕುಳಿತಿದ್ದರು. ಹ್ಹ ಹ್ಹ ಹ್ಹ. ಸಾಹಿತ್ಯ ಸೃಷ್ಟಿ ಕಠಿಣವಾದುದು. ಸಮಾಧಾನದಿಂದ ಇರು. ಅದಾಗದೇ ಒಲಿಯುತ್ತದೆ.”
ಸ್ವಲ್ಪ ಸಮಾಧಾನವಾಗಿತ್ತು, ಒಂದು ಫಳಿಗೆ.
ಈ ಅಲೆಗಳು ಸುಮ್ಮನಿರುವುದನ್ನು ಬಿಟ್ಟು, ದಡದಲ್ಲೇನಿದೆ ಎಂದು ಹರಡಲು ಹೋಗುತ್ತವೆ! ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತವೆ. ಹೋಗುವುದೆಲ್ಲಿಗೆ? ಮತ್ತಲ್ಲೇ ತಂದು ಹಾಕಿತ್ತವೆ!
ಏನರ್ಥ? ಅನರ್ಥ.
ಅಸಂಬದ್ಧ ಇಲ್ಲಿ ಏನೂ ಮುಟ್ಟುವುದಿಲ್ಲ. ತೀರದಲ್ಲೊಂದು ಒಳ್ಳೆಯ ಹೂವಿಲ್ಲ. ಇಗೋ, ಈ ದಿನ ತಂಗಾಳಿಯೂ ಇಲ್ಲ. ಬಿಸಿ ಬಿಸಿ ಗಾಳಿ ಬೀಸುತ್ತುದೆ – ನನ್ನ ಮನದ ಬಿಸಿ ಹೆಚ್ಚಿಸಲು ಯತ್ನಿಸುವಂತೆ. ಆಗಾಗ ಬರುವ ರಕ್ಕಸ ಅಲೆಗಳಿಗೆ ಇನ್ನೇನು ತಿಂದು ಬಿಡುತ್ತವೋ ಎಂಬಷ್ಟು ರೋಷ. ನನ್ನರಿವಿಗೇ ಬಾರದ ಹೃದಯದ ಮೂಲೆಯಲ್ಲಿ ಎಂದೂ ಸಾಯದ ಭಯ. ಆಶಾವಾದದ ಸುಳಿವೇ ಇಲ್ಲ! ನಿರಾಶೆಯ ಗೂಡು. ಬೋಳು ತೀರ. ಕೇಕೆಯಿಡುವ ಜನರು. ಅವರನ್ನು ಸದೆಬಡಿದೇ ತೀರುತ್ತೇನೆ ಎಂಬಂತೆ ಬರುವ ಅಲೆಗಳು. ಏನೂ ಆಗಬಹುದು. ಯಾವ ಕ್ಷಣದಲ್ಲೂ. ಯಾರ ಜೀವವನ್ನೂ ಕದಿಯಬಹುದು ರಕ್ಕಸ ಅಲೆಗಳು. ಇಲ್ಲಿ ಎಲ್ಲವೂ ಲಯವಾಗಯವಂತೆ ಭಾಸವಾಗುತ್ತಿದೆ!

ನದಿಗಳು, ಬೆಟ್ಟ ಗುಡ್ಡದಿಂದ ಬರುತ್ತವೆ, ಆಕರ್ಷಣೆಗೆ ಒಳಗಾಗಿ. ಸಿಹಿ ಸಿಹಿದಾರ ನೀರ ಸೆಲೆಗಳು. ಹರಿದು ಹರಿದು, ಅಡೆ ತಡೆಗಳನ್ನು ಜಿಗಿದು, ಹಾರಿ ಜಲಪಾತವಾಗಿ ತಣ್ಣಗೆ ಸೇರಿಕೊಳ್ಳುತ್ತವೆ. ಹೆಚ್ಚು ಹೊತ್ತು ತಗಲುವುದಿಲ್ಲ, ಸಮುದ್ರದ ಮೋಸವನ್ನು ಅರಿಯಲು. ಬರಿಯ ಉಪ್ಪಿನ ಕೊಂಪೆ!
ಅನ್ಯಾಯದ ಅರಮನೆಯಲ್ಲಿ ನುಗ್ಗಲೇ?
“ನನ್ನನ್ನು ಸೇರಿಕೋ” ಎಂದು ಕರೆದಂತೆ ಭಾಸವಾಗುತ್ತಿದೆ, ಕಡಲ ಒಡಲು, ಅದರಾಳದ ಬೆಂಕಿ. ಸಾವಿರ ಮೈಲಿನ ಸಣ್ಣ ತೊರೆಯಂತೆ , ಸಂತೋಷದಿಂದ ಜಿಗಿದು ಹೋಗುವುದೋ? ಶತಮಾನಗಳ ಹಿಂದೆ ಉಪ್ಪಾಗಿ, ಅಳು ನಗುವಿಲ್ಲದೆ ಇರುವ ಹಿನ್ನೀರಿನಂತೆ, ಶಬ್ದವಿಲ್ಲದೇ, ವಿಲೀನವಾಗಲೇ?
ಯಾರನ್ನೂ ಇರಿಸಿಕೋಳ್ಳದ ನೀನು, ನನ್ನನ್ನು ಹೇಗೆ?
ಇಗೋ ಹೊರಟೆ!
ಹೆಜ್ಜೆ ಹೆಜ್ಜೆಗೂ ನನ್ನ ಇಳಿತ, ನಿನ್ನ ಭರತ.
ಹಗುರಾದ ದೇಹದೊಂದಿಗೆ, ತೆರೆದ ಕಿವಿ, ನಿನ್ನ ಭೊರ್ಗರೆತದ ಶೃತಿಗೆ ಹಾಡುತ್ತ, ಇಳಿದೆ.
* * *
“ಅಯ್ಯೋ! ನರ್ಸ ನರ್ಸ! “
“ಡಾಕ್ಟರನ್ನು ಕರೀರಿ.ಬೇಗ!”
” ಪೇಶೆಂಟ್ ನಂಬರ್ ೧೩೭, ಬಕೆಟನ ಒಳಗೆ ತಲೆ ಸಿಕ್ಕಿಸಿಕೊಂಡಿದ್ದಾರೆ! ಉಸಿರು ಕಟ್ಟಿದೆ ಅನ್ಸುತ್ತೆ”


Leave a Reply