ಯಾವ ದಿಕ್ಕು?

ಹುಟ್ಟು ಕೇಳದೆಯೇ ಸಾವು ಕೇಳದೆಯೇ
ನಡುವೆ ಸಮಯದೋಟ
ನಿನ್ನೆ‌ ನಾಳೆಯೊಳು ಕಳೆದು ಹೋಗುವರೆ
ವಿರಳ ಇಂದು  ನೋಟ

ತಾಯಿ ತಂದೆಯರು ಬಂಧು ಬಾಂಧವರು
ಇಳಿಸಿದ ಪದ‌ ನೂರು
ಸೊರುತಿಹುದು ನನ ಕಿವಿಯು ಜೋರು
ಮೆದುಳಿನ ಕಾರುಬಾರು

ಅವರು ಎಡದವರು ಇವರು ಬಲದವರು
ಪರಚುತಿಹರು ಇವರವರ
ನಾನು ನೀಚ ನೀವೆಲ್ಲ ಉಚ್ಛ
ಕೆಳ ತಳ್ಳು ಉಳಿದ ಜನರ

ಮಾಲಿಕಳ ಕೊಲೆ ಸಂಚು ಹೂಡುತಿದೆ
ಮನೆಯ ನಾಲ್ಕು ಗೋಡೆ
ಸಮಯ ಹಾರಿ, ನಿನ ಪ್ರಾಣ ತೀರದಿರೆ
ನಂಬು, ನಿನ್ನ ಕಾಡೆ

ಎಲ್ಲ ಬೇಲಿಗಳ ತಳ್ಳಿ ಸಾಗುತಿರೆ
ಬಂತು ದೊಡ್ಡ ಬಯಲು
ಆದಿ ಅಂತ್ಯವದು ಇಲ್ಲವಾದ ತೆರೆ
ನಕ್ಷೆಬರದ ಕಡಲು

ಖಾಲಿ ಬಯಲಿನಲಿ ರಾತ್ರಿ ಬರುವ ಇಲಿ
ಭಯದಿ ಓಡುತಿದೆ ಊರೆಲ್ಲ
“ಎಲ್ಲಿಂದ ಬಂದಿಹುದು ಇಂಥ ದೊಡ್ಡ ಇಲಿ?”
ಕೇಳಿದವ್ ತಮ್ಮಲ್ಲೆಲ್ಲ

ಇರುಳು ಎದ್ದು ಧಡಭಡಿಸಿ ನಡೆಯುತಿರೆ
ಬರುವ ಹಗಲಿನದೇ ಗತ್ತು
ನೀನು ಎದ್ದು ಉಳಿದವರ ಎಬ್ಬಿಸಿದೆ
ಮುಂದಿನ ದಾರಿಯ ಹೊತ್ತು

ದಿನಾಂಕ: ೨೭.೦೫.೨೦೨೧
ಸ್ಥಳ: ಓಲ್ಡನ್ಬರ್ಗ


Leave a Reply

Discover more from Trupthi Karanth Ramadeva

Subscribe now to keep reading and get access to the full archive.

Continue reading