
ನಾನು ಮನೆ. ವೆಂಕಟೇಶನ ಮನೆ. ವೆಂಕಟೇಶ ಎಂದು ಅವನಿಗೆ ಯಾರೂ ಕರೆಯುವುದಿಲ್ಲ, ಮನೆ ಮಂದಿ ಅಪ್ಪ ಎಂದರೆ, ಊರವರು, ವೆಂಕ್ಟ, ಎಂಕ್ಟ, ವೆಂಕಟೇಶ್ ಎಂದು ಕರೆಯುತ್ತಾರೆ
ನನ್ನಲ್ಲಿಗೆ ಬರುವವರು ಬಹಳಷ್ಟು ಜನ. ಊಟ ಮಾಡಿ, ನಿದ್ರೆ ಮಾಡಿ, ಎದ್ದು ನಡೆದು ಬಿಡುವರು. ಎಂದು ಕಿರುಚಿದ್ದು ಕೇಳಿತೋ, ಇಲ್ಲವೋ ತಿಳಿಯದು. ಮತ್ತೊಮ್ಮೆ ಬರುವವರು ಕೆಲವೇ ಕೆಲವು ಮಂದಿ. ಆದರೆ, ಆ ಕೆಲವು ಮಂದಿ, ಹಲವು ಬಾರಿ ಬರುತ್ತಾರೆ. ಅವರೆಲ್ಲರ ಹೆಸರು ಗೊತ್ತಿಲ್ಲದಿದ್ದರೂ, ಅವರ ಹೆಜ್ಜೆಗಳು ನನ್ನ ಅನುಭವಕ್ಕೆ ಬರುತ್ತವೆ. ಯಾರ ತೂಕ ಏರಿದೆ, ಇಳಿದಿದೆ ಎಂಬುದೂ ತಿಳಿಯುತ್ತದೆ.
ನಾನು ಹುಟ್ಟಿದಾಗ(ಕಟ್ಟಿದಾಗ?), ನನ್ನ ಸುತ್ತಮುತ್ತ ದಟ್ಟ ಅರಣ್ಯ. ಮನೆಮಂದಿಯ ಸಂಭ್ರಮ ಹೇಳತೀರದು. ಸಣ್ಣ ಪುಟ್ಟ, ಇನ್ನೂ ಸಣ್ಣ ಪುಟ್ಟಿ. ಅಪ್ಪ ಅಮ್ಮ. ಮಕ್ಕಳೋ, ಒಳಗೆಲ್ಲ ಓಡಾಡುತ್ತಿದ್ದವು. ಅವು ನಡೆದರೆ, ನನಗೆ ಕಚಗುಳಿ.
ಸ್ವಲ್ಪವೇ ವರ್ಷಗಳಲ್ಲಿ ನನ್ನ ಸುತ್ತ, ಒಂದೊಂದೇ ಮನೆಗಳು ಏಳಲಾರಂಭಿಸಿದವು; ನಾಯಿ ಕೊಡೆಯಂತೆ. ಕೆಲವು ಚಿಕ್ಕವು, ಕೆಲವು ದೊಡ್ಡವು. ರಮೇಶನ ಮನೆಯಂತೂ ಬಹಳ ದೊಡ್ಡದು. ನಾನೆಷ್ಟು ದೊಡ್ಡ ಮನೆಯೆಂದು ನನಗೆ ತಿಳಿದಿಲ್ಲ. ನಮ್ಮನ್ನು ನಾವೇ ಹೇಗೆ ನೋಡಿಕೊಳ್ಳಲು ಸಾಧ್ಯ? ಆದರೆ ಅಮ್ಮ ಆಡುವ ಮಾತು ಕೇಳಿ, ನಾನು ಸಾಧಾರಣ ಮನೆ ಅಂತ ನಂಬಿದ್ದೇನೆ. ಅಮ್ಮ ಅಂದಳು, “ಹರಿಶ್ಚಂದ್ರ ಚಿಕ್ಕಪ್ಪ ನಮ್ಮ ಮನೆಗೆ ಒಮ್ಮೆಯೂ ಬರಲಿಲ್ಲ. ಇಂಥಾ ಮನೆಗೆ ಅದಾರು ನೋಡಲು ಬರುತ್ತಾರೆ?” ಈ ಮೂದಲಿಕೆ ಕೇಳಿಸಿಕೊಂಡ ಮೇಲೆ ನಾನು ಅಷ್ಟೇನು ಸುಂದರವಾಗಿರಲಿಕ್ಕಿಲ್ಲ ಎಂಬ ಭಾವನೆ.
ಅದೇನೇ ಇದ್ದರೂ ಮನೆಯವರು ಅದೆಷ್ಟು ಪ್ರೀತಿಯಿಂದ ಬೇಗ ಎದ್ದು ಗುಡಿಸಿ ಒರೆಸುತ್ತಾರೆ! ಮೂಲೆ ಮೂಲೆಯನ್ನೂ ಬಿಡದೆ, ಸ್ವಚ್ಛಗೊಳಿಸುತ್ತಾರೆ. ನಾಲ್ಕಾರು ವರ್ಷಕ್ಕೊಮ್ಮೆ ಬಣ್ಣಹೊಡೆಸುತ್ತಾರೆ. ಬಿಳಿ, ಹಳದಿ, ನೀಲಿ, ಬಿಳಿ, ಗುಲಾಬಿ : ಇಷ್ಟು ಬಣ್ಣಗಳನ್ನು ಬಳಿದಿದ್ದಾರೆ ನನಗೆ. ಪಾಪ! ಸುಂದರನ ಮನೆಗೆ ಬಣ್ಣ ಬೀಳದೇ, ಹತ್ತಾರು ವರ್ಷಗಳಾಯ್ತು.
ಬೇರೆ ಮನೆಗಳನ್ನು ನೋಡಿದಾಗ, ಅವುಗಳ ಬಳಿ, ಕಷ್ಟ ಸುಖ ಹಂಚಿಕೊಂಡರೆ ಅದೆಷ್ಟು ಚೆಂದ ಅಂತ ಅನ್ನಿಸುವುದುಂಟು. ಆದರೆ, ಅವು ಬಲು ದೂರದಲ್ಲಿ ಇರುವವು. ಭಾಷೆ ಬರುತ್ತದೋ, ಇಲ್ಲವೋ! ನನಗೆ ನಿಮ್ಮಂತೆ ನಡೆದಾಡಲು ಆಗುವುದಿಲ್ಲವಲ್ಲ! ಹಲವು ಬಾರಿ ಕಿರುಚಿದ್ದೇನೆ, “ಸುಂದರನ ಮನೇs, ಸುಂದರನ ಮನೇs” ಎಂದು. ಸುಂದರನ ಮನೆ ಉತ್ತರಿಸಲೇ ಇಲ್ಲ! ಆದರೂ, ಬೇಸರವಾದಾಗ ಈಗಲೂ ಕಿರುಚುವುದುಂಟು. ಅದೆಲ್ಲಿಯಾದರೂ ಸುಂದರನ ಮನೆಯ ಕಿವಿ ಚುರುಕಾಗಿ, ನನ್ನ ಮಾತು ಕೇಳಿಬಿಟ್ಟರೆ?
ರಾತ್ರಿ ನನಗೆ ಅಷ್ಟು ಪ್ರಿಯವಲ್ಲ. ಯಾರೂ ಓಡಾಡುವುದಿಲ್ಲ. ಕೆಲವೊಮ್ಮೆ ಮನೆಯಲ್ಲಿ, ಕಾರ್ಯಕ್ರಮವಾದಾಗ, ಕೋಪ ಬರುತ್ತದೆ, ಮಣ್ಣು ಕಾಲಲ್ಲಿ ಓಡಾಡುವ ಜನ, ಗಜ-ಗಜ ಮಾತನಾಡುವ ಬಾಯಿಗಳು. ಶಾಂತಿಗಾಗಿ ಹಪಹಪಿಸುತ್ತೇನೆ. ಆದರೆ, ಪ್ರತಿ ರಾತ್ರಿ, ಕತ್ತಲು ಕವಿದಂತೆ ಅದೇನೋ ಭಯ. ಗಲಾಟೆ ಇದ್ದರೂ ತೊಂದರೆಯಿಲ್ಲ, ಎದ್ದೇಳಿ, ಓಡಾಡಿ ಎಂದು ಅನ್ನಿಸುತ್ತದೆ. ಮನೆಮಂದಿ ಇಲ್ಲವಾದಲ್ಲಿ, ಕೇಳಲೇ ಬೇಡಿ; ಕಣ್ಣು ತೆರೆಯದೆಯೇ, ಹನುಮಾನ ಚಾಲೀಸು ಗೊಣಗುತ್ತ ಮಲಗಿಬಿಡುತ್ತೇನೆ. ಇನ್ನೇನು ಮಾಡಿಯೇನು!
ಸ್ವಗತದಲ್ಲೇ ಗತಿಸುವುದ ನನ್ನ ಬದುಕು.
ಮಾತನಾಡುವುದಿಲ್ಲವೆಂದಿಲ್ಲ.
“ಈ ಮನೆಯಲ್ಲಿ ಹೇಳುವವರು ಕೇಳುವರಾರೂ ಇಲ್ಲವೇ?” ಎಂದು ಅಪ್ಪ ನುಡಿದಾಗ, ನಾನು ಸದಾ ಉತ್ತರಿಸುತ್ತೇನೆ. ಆದರೆ ಅಪ್ಪ, ಯಾವ ಉತ್ತರವನ್ನೂ ನಿರೀಕ್ಷಿಸಿದಂತೆ ಇರುವುದಿಲ್ಲ.
ಪುಟ್ಟ, ಯಾರೂ ಇಲ್ಲದ ಹೊತ್ತಲ್ಲಿ, ಕಿಟಕಿಯ ಬಳಿ ನಿಂತು, ಸಿಗರೇಟಿನ ತರದ್ದೇನೋ ಹಚ್ಚಿ ಹೊಗೆ ಬಿಟ್ಟಾಗ, ಕೆಮ್ಮಿ, ಬೈದಿದ್ದೇನೆ. ಪುಟ್ಟನೂ ಕಿವಿಗೊಡಲಿಲ್ಲ. ತುಂಟಿ ಪುಟ್ಟಿ ಗೋಡೆಯ ಮೇಲೆ ಬಣ್ಣದ ಕಡ್ಡಿಯಿಂದ ಗೀಚಿದಾಗ, “ಏಯ್” ಎಂದು ಧಮಕಿ ಹಾಕಿದ್ದೇನೆ.
ಕೆಲವೊಮ್ಮೆ ಅನ್ನಿಸುತ್ತದೆ, ಬಹುಶಃ ನನ್ನ ಮಾತು ಇವರಿಗೆ ಕೇಳಿಸದೇನೋ ಎಂದು. ಏಕೆಂದರೆ, ಯಾರೂ ಯಾವತ್ತೂ ನನ್ನ ಮಾತಿಗೆ ಉತ್ತರವನ್ನೇ ಕೊಟ್ಟಿಲ್ಲ.
ವಯಸ್ಸಾಯಿತಲ್ಲ! ಏನೇನೋ ಆಲೋಚನೆಗಳು.
ಬರೆದದ್ದು : ಸೆಪ್ಟೆಂಬರ್ ೨೦, ೨೦೧೯

Leave a Reply